ಪಾವಗಡ: ಗಡಿನಾಡು ಪಾವಗಡದಲ್ಲಿ ವಿವಿಧ ಪಕ್ಷಗಳ ಪ್ರಚಾರದ ಭರಾಟೆ ಚೋರಾಗಿಯೇ ನಡೆಯುತ್ತಿದೆ.
ಕಾಂಗ್ರೆಸ್ ಅಭ್ಯರ್ಥಿ ಹೆಚ್.ವಿ.ವೆಂಕಟೇಶ್ ತಮ್ಮ ಕುಟುಂಬ ಸದಸ್ಯರು ಹಾಗೂ ಅಪಾರ ಅಭಿಮಾನಿಗಳೊಂದಿಗೆ ವೆಂಕಟೇಶ್ವರ ಸ್ವಾಮಿ ಮತ್ತು ಶನೇಶ್ವರ ಸ್ವಾಮಿಗೆ ವಿಶೇಷ ಪೂಜೆ ನೆರವೇರಿಸಿ ತಾಲೂಕು ಕಚೇರಿಗೆ ಹೋಗಿ ನಾಮಪತ್ರ ಸಲ್ಲಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್, ಬಿಜೆಪಿ ಸರ್ಕಾರ ಜನ ಸಾಮಾನ್ಯರ ರಕ್ತ ಹಿಂಡುತ್ತಿದೆ. ಬದಲಾವಣೆ ಬಯಸಿರುವ ಜನತೆ ಮೇ 10 ರಂದು ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ಕೊಡುವ ಮೂಲಕ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದ್ದಾರೆ.
ನನ್ನ ಕನಕಪುರ ಕ್ಷೇತ್ರದಲ್ಲಿ ನಾನು ನಾಮಪತ್ರ ಸಲ್ಲಿಸುವ ಸಮಯದಲ್ಲೂ ಸಹ ಇಷ್ಟು ಜನರು ಇರಲಿಲ್ಲ. ಇಲ್ಲಿ ಹೆಚ್ಚು ಜನ ಸೇರಿರುವುದು ನೋಡಿ ಖುಷಿ ತಂದಿದೆ, ಹಾಗೆ ಇದು ಹೆಚ್.ವಿ.ವೆಂಕಟೇಶ್ ಗೆಲುವಿಗೆ ಮುನ್ಸೂಚನೆಯಾಗಿದೆ ಎಂದು ಸಂತಸ ಪಟ್ಟರು.
ಜನ ಬಿಜೆಪಿಯನ್ನು ಮನೆಗೆ ಕಳುಹಿಸಲಿದ್ದಾರೆ: ದೇಶ ಸೇರಿದಂತೆ ರಾಜಕಾರಣವನ್ನು ಅವಲೋಕಿಸಿದರೆ ಕಾಂಗ್ರೆಸ್ ಪಕ್ಷದ ಅಧಿಕಾರ ಅವಧಿಯಲ್ಲೇ ಹೆಚ್ಚಿನ ಜನಪರ ಯೋಜನೆಗಳು ಹಾಗೂ ಅಭಿವೃದ್ಧಿ ಮತ್ತು ಬೃಹತ್ ರೋಡ್ ಕಾರ್ಯ ನಡೆದಿರುವುದನ್ನು ಜನತೆ ಮನಗಂಡಿದ್ದಾರೆ, ಬಿಜೆಪಿಯ ಭ್ರಷ್ಟಾಚಾರ, ಬೆಲೆ ಏರಿಕೆ, ರೈತ, ಕಾರ್ಮಿಕ ಹಾಗೂ ಜನವಿರೋಧಿ ಕಾನೂನು ಮತ್ತು ದಬ್ಬಾಳಿಕೆಗೆ ಬೇಸತ್ತಿರುವ ಜನತೆ ಚುನಾವಣೆಯಲ್ಲಿ ಬಿಜೆಪಿಯನ್ನು ಮನೆಗೆ ಕಳುಹಿಸಲಿದ್ದಾರೆ ಎಂದರು.
ಕಾಂಗ್ರೆಸ್ ಅಧಿಕಾರದಲ್ಲಿದ್ದಾಗಲೆ ಕ್ಷೇತ್ರದಲ್ಲಿ ಏಷ್ಯಾದ ಅತಿದೊಡ್ಡ ಸೋಲಾರ್ ಘಟಕ ನಿರ್ಮಾಣ, ಭದ್ರಾ ಮೇಲ್ದಂಡೆ ಯೋಜನೆ, ಶಾಲಾ ಕಾಲೇಜುಗಳು, ಹಾಸ್ಟೆಲ್‌ಗಳ ನಿರ್ಮಾಣ, ರೈಲ್ವೆ ಕಾಮಗಾರಿಗಳಂತಹ ಅಭಿವೃದ್ಧಿ ಕಾಮಗಾರಿ ನಡೆದಿವೆ. ಅಭಿವೃದ್ಧಿಗಾಗಿ ಜನತೆ ಕಾಂಗ್ರೆಸ್ ಅಭ್ಯರ್ಥಿ ಹೆಚ್.ವಿ.ವೆಂಕಟೇಶ್ ಅವರನ್ನು ಗೆಲ್ಲಿಸಬೇಕು ಎಂದು ಕರೆ ನೀಡಿದರು. ಎಪಿಸಿಸಿ ಮಾಜಿ ಅಧ್ಯಕ್ಷ ರಘುವೀರ ರೆಡ್ಡಿ, ಶಾಸಕ ವೆಂಕಟರಮಣಪ್ಪ, ಮಾಜಿ ಸಂಸದ ರಾದ ಚಂದ್ರಪ್ಪ ಸೇರಿದಂತೆ ಸುಮಾರು ಇಪ್ಪತೈದು ಸಾವಿರಕ್ಕೂ ಅಧಿಕ ಅಭಿಮಾನಿಗಳೊಂದಿಗೆ ಮೆರವಣಿಗೆಯನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೇಶ್ ಬಾಬು, ರಾಮಾಂಜಿನಪ್ಪ, ಜಿಲ್ಲಾಧ್ಯಕ್ಷ ಚಂದ್ರಶೇಖರ್ ಗೌಡ, ಮಾಜಿ ಸಂಸದ ಚಂದ್ರಪ್ಪ, ಬತ್ತಿನೇನಿ ನಾನಿ, ಶಂಕರರೆಡ್ಡಿ, ಮಾನಂ ವೆಂಕಟಸ್ವಾಮಿ, ಹೆಚ್.ಎ.ಕುಮಾರ ಸ್ವಾಮಿ, ಪಿ.ಹೆಚ್.ರಾಜೇಶ್, ರವಿ, ಅವಿನಾಶ್, ನವೀನ್, ಸೇರಿದಂತೆ ಕಾಂಗ್ರೆಸ್ ತಾಲೂಕು ಘಟಕದ ಪದಾಧಿಕಾರಿಗಳು ಹಾಜರಿದ್ದರು.