ನಮ್ಮ ರಾಜ್ಯಕ್ಕೆ ಕರ್ನಾಟಕವೆಂದು ನಾಮಕರಣಗೊಂಡು ಐವತ್ತು ವರ್ಷವಾದರೂ ಇಂದಿನ ಕಾಲಮಾನಗಳಲ್ಲಿ ಕನ್ನಡ ಭಾಷೆಯನ್ನು ನಮ್ಮ ದಿನನಿತ್ಯದಲ್ಲಿ ನಾವೇಷ್ಟು ಬಳಕೆ ಮಾಡುತ್ತಿದ್ದೇವೆ ಎಂಬುದರ ಕುರಿತು ಸ್ವಲ್ಪ ಆಲೋಚಿಸಿದರೆ, ಕನ್ನಡ ಮೊದಲಿಗಿಂತಲೂ ಇಂದು ಪತನದ ಹಾದಿಯತ್ತ ಸಾಗುತ್ತಿದೆ ಎಂದು ಹೇಳಿದರೆ ತಪ್ಪಾಗಲಾರದು. ಇದಕ್ಕೆ ಕಾರಣ ಇಂದಿನ ಜಾಗತಿಕ ಯುಗದಲ್ಲಿ ಎಲ್ಲರೂ ಅನ್ಯ ಭಾಷೆಗಳ ಮೊರೆಹೋಗುತ್ತಿರುವುದು.
ಕನ್ನಡ ಭಾಷೆಯ ಅಭಿಮಾನ ಬರೀ ನವೆಂಬರ್ ಒಂದಕ್ಕೆ ಮಾತ್ರ ಸೀಮಿತ ಎನ್ನುವಂತಾಗಿದೆ. ನಮ್ಮ ಭಾಷೆಯು ಹಲವಾರು ರೀತಿಯ ಸಮಸ್ಯೆಗಳನ್ನ ಎದುರಿಸುತ್ತಿದೆ ಅದೆಲ್ಲ ಸಮಸ್ಯೆಗಳನ್ನು ಮೀರಿ ನಮ್ಮ ಭಾಷೆ ಬೆಳೆಯಬೇಕಿದೆ. ಇಂದಿನ ದಿನಮಾನದಲ್ಲಿ ಕನ್ನಡ ಭಾಷೆ ಮಾತನಾಡುವವರ ಸಂಖ್ಯೆ ಕ್ಷೀಣಿಸುತ್ತಿದೆ. ಭಾಷಾಭಿಮಾನ ಎನ್ನುವಂತಹದ್ದು ನಮ್ಮ ಭಾಷೆಯನ್ನು ಪ್ರೀತಿಸಿ ಅನ್ಯ ಭಾಷೆಗಳ ದ್ವೇಷಿಸಬೇಕೆಂದೇನಿಲ್ಲ ನಾವು ಮಾತನಾಡುವ ಮಾತಿನಲ್ಲಿ ನಮ್ಮ ಭಾಷೆಯನ್ನು ಪ್ರತಿನಿತ್ಯ ಬಳಸಿದರೆ ತನಗೆ ತಾನೇ ಬೆಳೆಯುತ್ತಾ ಹೋಗುತ್ತದೆ.
ನಮ್ಮ ಭಾಷೆಯ ಪ್ರತೀ ದಿನ, ಪ್ರತೀ ಕ್ಷಣ ಬಳಸಿದರೆ ಮಾತ್ರ ಉಳಿಸಲು ಸಾಧ್ಯವೇ ಹೊರತು ಅನ್ಯ ಭಾಷೆಗಳ ಟೀಕಿಸುವುದರಿಂದಲ್ಲ. ಕೇವಲ ಭಾಷಾಭಿಮಾನ ಬೆಳೆಸಿಕೊಂಡರೆ ಸಾಲದು. ಪ್ರತಿನಿತ್ಯ ಕನ್ನಡ ಮಾತನಾಡಬೇಕು ಹಿಂದೆಲ್ಲ ನಾವು ಆಂಗ್ಲ ಭಾಷೆ ಬಳಸದೆ ಸ್ಪಷ್ಟ ಶುದ್ಧ ಕನ್ನಡ ಮಾತನಾಡುತ್ತಿದ್ದೆವು. ಆದರೆ ಈಗ ಆಂಗ್ಲ ಭಾಷೆಯ ಮಿಶ್ರಿತವಾಗಿ ಮಾತನಾಡುತ್ತಿದ್ದೇವೆ. ಶುದ್ಧ ಕನ್ನಡ ಮಾತನಾಡುವವರನ್ನು ಗುರುತಿಸುವುದೇ ಬಹಳ ಕಷ್ಟಕರವಾಗಿದೆ ಇದನ್ನು ನೆನೆಸಿಕೊಂಡರೆ ಎಂತಹ ವಿಪರ್ಯಾಸ ಅನಿಸುತ್ತದೆ.
ಬಹುಶಹ ಮುಂದೊಂದು ದಿನ ಕನ್ನಡವೇ ಹೋಗಿ ಪೂರ್ತಿ ಆಂಗ್ಲಮಯವಾದರು ಆಶ್ಚರ್ಯವೇನಿಲ್ಲ ಇಂದು ಎಲ್ಲರೂ ತಮ್ಮ ಮಕ್ಕಳ ಆಂಗ್ಲ ಭಾಷೆಯ ಶಾಲೆಗೆ ಕಳುಹಿಸಿ ಪೂರ್ತಿ ಆಂಗ್ಲ ಭಾಷೆಯ ರೂಡಿಸಿಕೊಳ್ಳುವಂತೆ ಮಾಡುತ್ತಿದ್ದಾರೆ. ಇಂತಹ ಮಕ್ಕಳಿಗೆ ತನ್ನ ತಂದೆ-ತಾಯಿಗಳೇ ಸಾಧ್ಯವಾದಷ್ಟು ತನ್ನ ಕುಟುಂಬದಲ್ಲೇ ಕನ್ನಡ ಭಾಷೆಯನ್ನು ಕಲಿಸಿಕೊಟ್ಟರೆ ನಮ್ಮ ಭಾಷೆಯನ್ನು ಉಳಿಸಬಹುದು ಸಾಧ್ಯವಾದಷ್ಟು ಎಲ್ಲಾ ಕಡೆಗಳಲ್ಲೂ ನಮ್ಮ ಕನ್ನಡವನ್ನು ಮಾತನಾಡಬೇಕು. ನಮ್ಮ ಭಾಷೆ ನಾವು ಉಳಿಸದೆ ಮತ್ತಾರು ಉಳಿಸಲು ಸಾಧ್ಯವಿಲ್ಲ ನಮ್ಮೆಲ್ಲರ ಮಿಡಿತ, ಆಲೋಚನೆ ಕನ್ನಡ ಆದಾಗ ಮಾತ್ರ ಕನ್ನಡ ಉಳಿಸಲು ಸಾಧ್ಯ ಕನ್ನಡ ಭಾಷಾಭಿಮಾನ ಕೇವಲ ನವೆಂಬರ್ ಒಂದಕ್ಕೆ ಮಾತ್ರ ಸೀಮಿತವಾಗದೆ ಅದನ್ನು ಮೀರಿ ನಮ್ಮ ಉಸಿರಾಗಿ ಅದನ್ನು ದಿನನಿತ್ಯ ಬಳಸಿ ಉಳಿಸೋಣ. ಎದೆಯ ಬಗೆದರು ಇರಲಿ ಕನ್ನಡ. ಹೃದಯ ಬಡಿದರು ಬರಲಿ ಕನ್ನಡ.